ದಾರಾಸುರಮ್ 
ತಮಿಳು ನಾಡಿನ ತಂಜಾವೂರ್ ಜಿಲ್ಲೆಯಲ್ಲಿ ಕುಂಭಕೋಣಮ್ ಬಳಿಯ ಒಂದು ಸ್ಥಳ. ಮೂಲತಃ ರಾಜರಾಜಪುರಮ್ ಎಂದಿದ್ದ ಈ ಸ್ಥಳದ ಹೆಸರು ಶತಮಾನಗಳುರುಳಿದಂತೆ ಅಪಭ್ರಂಶಗೊಂಡು ದಾರಾಸುರಮ್ ಎಂದಾಯಿತು. ಇದಕ್ಕೆ ಹೊಂದಿದಂತೆ ಅಯಿರತ್ತಳಿ ಅಥವಾ ಪಳೈಯಾರೈ ಎಂಬ ಸ್ಥಳವಿದೆ. ಇದು ಕನಿಷ್ಟ 8ನೆಯ ಶತಮಾನದಿಂದ ಪ್ರಖ್ಯಾತವಾಗಿದೆ. ದುರ್ವಾಸ ಮುನಿಗಳ ಶಾಪದಿಂದ ತನ್ನ ಬಣ್ಣವನ್ನು ಕಳೆದುಕೊಂಡ ಇಂದ್ರನ ಐರಾವತ ತನ್ನ ಮೊದಲಿನ ಬಣ್ಣವನ್ನು ಈ ಸ್ಥಳದಲ್ಲಿ ಮರಳಿ ಪಡೆಯಿತೆಂದು ಸ್ಥಳ ಪುರಾಣ ಹೇಳುತ್ತದೆ. ಚೋಳರ ಕಾಲದಲ್ಲಿ ಈ ಸ್ಥಳ ಹೆಚ್ಚಿನ ಮಹತ್ತ್ವ ಪಡೆಯಿತು. ಚೋಳ ಅರಸ ಎರಡನೆಯ ರಾಜರಾಜ (1146-1163) ಇಲ್ಲಿ ಶಿವನಿಗಾಗಿ ಭವ್ಯವಾದ ಐರಾವತೇಶ್ವರ ಮಂದಿರವನ್ನು ಕಟ್ಟಿಸಿದ. ಈ ಮಂದಿರದ ತಳವಿನ್ಯಾಸ ಮತ್ತು ವಿಮಾನರಚನೆಗಳು ಒಂದನೆಯ ರಾಜರಾಜ ಚೋಳ ಕಟ್ಟಿಸಿದ ತಂಜಾವೂರಿನ ದೊಡ್ಡ ದೇವಾಲಯದವುಗಳಂತೆಯೇ ಇವೆ. ದಾರಾ ಸುರಮ್‍ನಲ್ಲಿರುವ ದೇವಾಲಯ ಪೂರ್ಣವಾಗಿ ಕಲ್ಲಿನಲ್ಲೇ ನಿರ್ಮಿತವಾದ್ದು. ಇದು ಐದು ಅಂತಸ್ತುಗಳಿಂದ ಕೂಡಿದೆ. ಮಂದಿರದ ಮುಖಮಂಟಪ ರಥಾಕೃತಿಯದು. ಇದು ಕಲ್ಲಿನ ಗಾಲಿ ಮತ್ತು ಕುದುರೆಗಳಿಂದ ಕೂಡಿ ಸ್ವಾರಸ್ಯಮಯವಾಗಿದೆ. ಮಂದಿರಕ್ಕೊಂದು ಪ್ರಾಕಾರವಿದೆ. ಅದರ ದ್ವಾರದ ಮೇಲೆ ಕಿರಿಯ ಗೋಪುರವಿದೆ. ಬಹುಶಃ ಪ್ರಾಚೀನ ಕಾಲದಲ್ಲಿ ಇಲ್ಲಿ ಒಂದಕ್ಕಿಂತ ಹೆಚ್ಚು ಪ್ರಾಕಾರಗಳಿದ್ದವು. ಕೇವಲ ವಾಸ್ತು ದೃಷ್ಟಿಯಿಂದಲ್ಲದೆ ಕೆತ್ತನೆಯ ಕೆಲಸ ಹಾಗೂ ಮೂರ್ತಿ ಶಿಲ್ಪಗಳಿಂದಲೂ ಈ ಮಂದಿರ ಗಮನಾರ್ಹವಾದ್ದು. ಋಷಿಪತ್ನಿಯರು ಸುತ್ತುವರಿದಿರುವ, ಸುಂದರವಾದ ಪುರುಷ ಪ್ರಮಾಣದ ಭಿಕ್ಷಾಟನ ಸಮೂಹ (ಇದು ಈಗ ತಂಜಾವೂರಿನ ಕಲಾಶಾಲೆಗೆ ಸ್ಥಳಾಂತರಗೊಂಡಿದೆ.) ಗಜಾಸುರ ಸಂಹಾರ ಮೂರ್ತಿ ಮುಂತಾದವು ಗಮನಾರ್ಹವಾದವು. ಇವೆಲ್ಲವೂ ಉಜ್ಜಿದ ಕಪ್ಪು, ಕಣಶಿಲೆಯಲ್ಲಿ ನಿರ್ಮಿತವಾಗಿದೆ. ಇಲ್ಲಿ 2ನೆಯ ರಾಜರಾಜ ಅರಸ, ಅವನ ಅರಸಿ, ಇವರ ಶಿಲ್ಪಾಕೃತಿಗಳುಂಟು. ಅಪ್ರತಿಮವಾದ ಶಿಲ್ಪ ಕೃತಿಗಳ ಸಮೂಹವೊಂದು ಇದೆ. ಅದು ದೇವಾಲಯದ ಅಧಿಷ್ಠಾನದ ಮೇಲೆ ಒಂದೇ ಪಟ್ಟಿಕೆಯಲ್ಲಿ ಅರೆಯುಬ್ಬಾಗಿ ಕೆತ್ತಲಾಗಿರುವ ಚಿಕ್ಕ ಫಲಕಗಳಿಂದ ಕೂಡಿದೆ. ಅವುಗಳಲ್ಲಿ ಪ್ರತಿಯೊಂದು ತಮಿಳು ನಾಡಿನ ಹೆಸರಾಂತ 63 ಶೈವಸಂತರ (ಪುರಾತನರ) ಜೀವನಗಳಿಂದ ಆಯ್ದ ಘಟನೆಗಳಲ್ಲಿ ಒಂದನ್ನು ತೋರಿಸುತ್ತದೆ. ಅವುಗಳಿಗೆ ಹೆಸರಿನ ಪಟ್ಟಿಕೆಗಳಿವೆ. ಚಂಡೇಶ್ವರ, ದೇವಿ ಮತ್ತು ಶರಭಮೂರ್ತಿಯ ಮಂದಿರಗಳು ಮುಖ್ಯ ದೇವಾಲಯಕ್ಕೆ ಸಮಕಾಲೀನವಾದಂಥವು.
(ಪಿ.ಆರ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ